ನಶಾ ಜಗತ್ತಿನ ಝಲಕ್ಕುಗಳೊಂದಿಗೆ ಝಗಮಗಿಸಿತು `ಕೈಲಾಸ ಕಾಸಿದ್ರೆ` ಟ್ರೈಲರ್!
Posted date: 01 Fri, Mar 2024 09:29:04 PM
ಈ ಹಿಂದೆ ಬಿಡುಗಡೆಯಾಗಿದ್ದ ಟ್ರಾನ್ಸ್ ಸಾಂಗ್ ಮೂಲಕ ವ್ಯಾಪಕ ಕ್ರೇಜ್ ಸೃಷ್ಟಿಸಿದ್ದ ಚಿತ್ರ `ಕೈಲಾಸ ಕಾಸಿದ್ರೆ`. ನಾಗ್ ವೆಂಕಟ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಈ ದಿನಮಾನದ ಯುವ ಜನಾಂಗದ ಕಥೆಯನ್ನೊಳಗೊಂಡಿರುವ, ಎಲ್ಲ ಅಭಿರುಚಿಯ ಯುವ ಪ್ರೇಕ್ಷಕರನ್ನೂ ಕೂಡಾ ಆವರಿಸಿಕೊಳ್ಳುವ ಕಥೆ ಹೊಂದಿರುವ ಚಿತ್ರವೆಂಬ ವಿಚಾರವನ್ನ ಚಿತ್ರತಂಡವೇ ಜಾಹೀರು ಮಾಡಿತ್ತು. ಹಾಡುಗಳ ಮೂಲಕ ಹಂತ ಹಂತವಾಗಿ ಸೆಳೆಯುತ್ತಾ ಸಾಗಿ ಬಂದಿರುವ ಈ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಯುವ
ಆವೇಗದ ಕಥೆಯೊಂದರ ಸ್ಪಷ್ಟ ಸುಳಿವಿನೊಂದಿಗೆ ಈ ಟ್ರೈಲರ್ ನೋಡುಗರನ್ನೆಲ್ಲ ಸೆಳೆದುಕೊಂಡಿದೆ.
 
ಈ ಹಿಂದೆ ತಾರಕಾಸುರ ಚಿತ್ರದ ರಗಡ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾಗಿದ್ದವರು ರವಿ. ಚಿತ್ರವಿಚಿತ್ರ ಪಾತ್ರಗಳ ಮೂಲಕ ಅಚ್ಚರಿ ಮೂಡಿಸಿದ್ದ ರವಿ ಈ ಟ್ರೈಲರ್ ನಲ್ಲಿ ಲವರ್ ಬಾಯ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಇದೊಂದು ಇಮದಿನ ಯುವ ಜನಾಂಗದ ಒಳತೋಟಿಗಳ ಕಥೆ ಎಂಬುದನ್ನು ಸದರಿ ಟ್ರೈಲರ್ ಸಾಕ್ಷೀಕರಿಸಿದೆ. ವಯಸ್ಸಿನ ತುಮುಲಗಳಿಗೆ ವಶವಾಗಿ, ನಶೆಯ ಜಗತ್ತಿನೊಳಗೆ ಪ್ರವೇಶಿಸುವ ಯುವಕನೋರ್ವನ ಕಥಾ ಸಾರಾಂಶವನ್ನು ಧ್ವನಿಸುವಂತಿರುವ ಈ ಟ್ರೈಲರ್ ಅನ್ನು ನಾಗ್ ವೆಂಕಟ್ ಪರಿಣಾಮಕಾರಿಯಾಗಿ ರೂಪಿಸಿದ್ದಾರೆ.
 
ನಾಯಕ ರವಿ ಸೇರಿದಂತೆ ಒಂದಷ್ಟು ಪಾತ್ರಗಳ ಮಜಲುಗಳು ಈ ಮೂಲಕ ಪ್ರೇಕ್ಷಕರೆದುರು ತೆರೆದುಕೊಂಡಿವೆ. ದರಲ್ಲಿಯೂ ವಿಶೇಷವಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪಾತ್ರವಿಲ್ಲಿ ಪ್ರಧಾನವಾಗಿಯೇ ಸೆಳೆದಿದೆ. ಸೂರಜ್ ಒಂದಿಡೀ ಚಿತ್ರದ ತುಂಬಾ ಕ್ಯಾಟಿ ಆಗುವಂಥಾ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನಿಗೆ ಸರಿ ಸಮನಾಗಿರುವ ಆ ಪಾತ್ರ ಕೂಡಾ ಈ ಟ್ರೈಲರ್ ನ ಹೈಲೈಟ್ ಗಳಲ್ಲೊಂದು. ಇನ್ನುಳಿದಂತೆ ಒಂದು ಪಾತ್ರದ ಸುತ್ತಲೇ ನಿರೀಕ್ಷೆ ಮೊಳೆತುಕೊಳ್ಳುವಂಥಾ ಅಪರೂಪದ ಸೆಳೆತವೊಂದು ಈ ಟ್ರೈಲರ್ ನಲ್ಲಿ ಕಾಣಿಸುತ್ತದೆ. ಅದರ ಜೊತೆಜೊತೆಗೇ ದೃಷ್ಯ ಶ್ರೀಮಂತಿಕೆಯೂ ಸ್ಪಷ್ಟವಾಗಿ ಗೋಚರಿಸುವಂತಿದೆ. ಮಾಸ್ ಮಾತ್ರವಲ್ಲದೇ ಭರಪೂರ ನಗುವಿಗೂ ಕೊರತೆಯೇನಿಲ್ಲ ಎಂಬ ನಿಖರ ಸಂದೇಶವೊಂದು ಈ ಟ್ರೈಲರ್ ಮೂಲಕವೇ ರವಾನೆಯಾದಂತೆ ಭಾಸವಾಗುತ್ತಿದೆ. ಅಂದಹಾಗೆ, ಇದೊಂದು ಕ್ರೈಂ ಕಾಮಿಡಿ ಜಾನರಿನ ಸಿನಿಮಾ ಎಂಬ ವಿಚಾರವನ್ನು ನಿರ್ದೇಶಕರು ಹೇಳಿಕೊಂಡಿದ್ದರು. ಅದಕ್ಕೆ ತಕ್ಕುದಾದ ಪುರಾವೆಗಳು ಟ್ರೈಲರ್ ನಲ್ಲಿ ಕಾಣಿಸಿವೆ.
 
ರವಿ ಗೆ ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಫ್ಟ್‍ವೇರ್ ಜಗತ್ತಿನಿಂದ ಆಗಮಿಸಿರುವ ನಾಗ್ ವೆಂಕಟ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಅವರು ಮೊದಲ ಹೆಜ್ಜೆಯಲ್ಲಿಯೇ ಗಟ್ಟಿ ಕಥೆಯೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿ ಆಗಲಿದ್ದಾರೆಂಬುದಕ್ಕೂ ಈ ಟ್ರೈಲರ್ ಸಾಕ್ಷಿಯಂತಿದೆ. ಈಗಾಗಲೇ ಕೈಲಾಸ ಕಾಸಿದ್ರೆ ಚಿತ್ರ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಇದೇ ಮಾರ್ಚ್ 8ನೇ ತಾರೀಕಿನಂದು ಈ ಸಿನಿಮಾ ತೆರೆಗಾಣಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed